Contd...
ದಾರಿಯು ಎಲ್ಲೂ ಕ್ಲೋಸ್ ಆಗಿರದೇ ನಮ್ಮ ಪ್ರಯಾಣ ಗಂಗೋತ್ರಿಯವರೆಗೂ ಅದೇ ವೆಹಿಕಲ್ ನಲ್ಲಿ ಮುಂದುವರೆಯಿತು. ಗಂಗೋತ್ರಿ ತಲುಪಿದಾಗ ಸಂಜೆಯಾಗಿತ್ತು. ನಮ್ಮ ಗೈಡು, ಯಾರಿಗೂ ಮಲಗಬಾರದೆಂದು, ಗಂಗೋತ್ರಿಯಲ್ಲಿ ಓಡಾಡುತ್ತಿರಬೇಕೆಂದು ಹೇಳಿದ, ನಾವು ಗಂಗೋತ್ರಿಯ ದೇವಸ್ಥಾನ ಪಕ್ಕಕ್ಕೆ ಇರುವ ಒಂದು ಲಾಡ್ಜಿನಲ್ಲಿ ಉಳಿದುಕೊಂಡೆವು. ರಭಸವಾಗಿ ಹರಿಯುವ ಗಂಗಾನದಿಯನ್ನು ನೋಡುವುದೇ ಒಂದು ಆನಂದ, ಮಣ್ಣಿನ ಬಣ್ಣದಲ್ಲಿ ರಭಸವಾಗಿ ಹರಿಯುವ ನದಿಯ ಮಧ್ಯದಲ್ಲಿ ಒಂದು ದೊಡ್ಡ ವಾಹನ ಕೂಡ ಸಿಕ್ಕಿ ಹಾಕಿಕೊಂಡಿತ್ತು. ಅದು ತುಂಬಾ ದಿನದಿಂದ ಅಲ್ಲೇ ಇರುವ ತರ ಇತ್ತು, ಯಾರು ಕೂಡ ಅದನ್ನು ಹೊರಗೆ ತರುವ ಧೈರ್ಯ ಮಾಡಿದ ಹಾಗೆ ಕಾಣಲಿಲ್ಲ.
ಗಂಗೋತ್ರಿ ಹಿಂದೂಗಳ ಪವಿತ್ರ ಕ್ಷೇತ್ರ. ಗಂಗಾನದಿಯ ಉಗಮ ಇಲ್ಲಿಯೇ ಎಂದು ನಂಬಿರುವ, ಪುಣ್ಯ ಕ್ಷೇತ್ರ. ಗಂಗೋತ್ರಿಯ ದೇವಸ್ತಾನ, ಸುತ್ತಾ ಸಣ್ಣ ಗಲ್ಲಿಗಳು, ಅಲ್ಲೆಲ್ಲಾ ವಿವಿಧ ವಸ್ತುಗಳನ್ನು ಮಾರುವ ಸಣ್ಣ ಸಣ್ಣ ಅಂಗಡಿಗಳು. ಗಂಗಾನದಿಯ ತೀರ ಅನ್ನುವುದು ಬಿಟ್ಟರೆ, ಅದು ಎಲ್ಲಾ ಉಳಿದ ಪುಣ್ಯ ಕ್ಷೇತ್ರಗಳಂತೇಯೇ ಇತ್ತು. ಗಲ್ಲಿಗಳಲ್ಲಿ ಸಣ್ಣ ಪುಟ್ಟ ಹೋಟೆಲುಗಳು, ಎಲ್ಲವೂ ಸಸ್ಯಾಹಾರಿ ಹೋಟೆಲುಗಳು. ಎಲ್ಲಾ ಕಡೆ ಸಿಗುವುದು, ರೋಟಿ, ಸಬ್ಜಿ ಮಾತ್ರ. ಕೆಲವೊಂದು ಚೈನೀಸು ಹೋಟೆಲುಗಳೂ ಇದ್ದವು. ಗಂಗೋತ್ರಿಯೇ ನಮ್ಮ ಟ್ರೆಕಿಂಗ್ ಶುರು ಆಗುವ ಜಾಗ. ಅದೇ ನಮ್ಮ ಕೊನೆಯ ಜನ ವಸತಿ ಮತ್ತು ಲೌಕಿಕ ವಸ್ತುಗಳು ಸಿಗುವ ಜಾಗ. ಹಾಗಾಗಿ ಅಂದು ಎಲ್ಲರೂ ತಮ್ಮ ತಮ್ಮ್ವ ಮನೆಗಳಿಗೆ ಫೋನ್ ಮಾಡಿ ನಮ್ಮ ಯೋಗ-ಕ್ಷೇಮ ತಿಳಿಸಿ, ಇನ್ನು ೭-೮ ದಿನ ಬಿಟ್ಟೇ ನಮ್ಮ ಮಾತು-ಕತೆ ಎಂದು ಹೇಳಿದೆವು.
ಗಂಗಾನದಿಯನ್ನು ಅಲ್ಲಿ ಭಾಗಿರತಿ ಎಂದು ಕರೆಯುತ್ತಾರೆ. ಭಗೀರತ ಗಂಗೆಯನ್ನು ಭೂಮಿಗೆ ತಂದಿದ್ದರಿಂದ ಭಾಗಿರತಿ ಎನ್ನುತ್ತಾರೆ. ಹಿಂದೆ, ಗಂಗೋತ್ರಿಯಲ್ಲೇ ಹಿಮಗಡ್ಡೆಯಿತ್ತೆಂದೂ, ಗಂಗಾ ನದಿ ಮೊದಲು ಕಾಣುತ್ತಿದ್ದಿದ್ದು ಗಂಗೋತ್ರಿಯಲ್ಲೆಂದು, ಈಗ ಹಿಮಗಡ್ಡೆಯೆಲ್ಲಾ ಕರಗಿ, ಗಂಗೋತ್ರಿ ಅಲ್ಲಿಂದ ೧೮ ಕಿ.ಮಿ. ಹಿಂದೆ ಹೋಗಿದೆಯೆಂದು, ಆ ಜಾಗವನ್ನು ಗೋ-ಮುಖ್ ಎಂದು ಕರೆಯುತ್ತಾರೆಂದು ಓದಿರುವುದು ನೆನಪಾಗುತ್ತಿತ್ತು.
ಅದರ ಜೊತೆಗೆ, ಇನ್ನು ಒಂದು ವಿಷಯ ಓದಿರುವುದು ನೆನಪಿಗೆ ಬರುತ್ತಿತ್ತು. ಭಗೀರತನ ಕಥೆ ಕೇವಲ ಪುರಾಣದಲ್ಲಿ ಮಾತ್ರ, ಗಂಗಾನದಿ ಮಾನವ ನಿರ್ಮಿತವೆಂದೂ, ಅದರ ಕೆಲಸ ಸಂಪೂರ್ಣಾವಾಗುವುದಕ್ಕೆ ತುಂಬಾ ಸಮಯ ಹಿಡಿಯಿತೆಂದೂ, ಅದು ಮುಗಿದಿದ್ದು ಭಗೀರತ ಎಂಬಾ ರಾಜನಕಾಲದಲ್ಲೇಂದು ಒಂದು ವೆಬ್-ಸೈಟಿನಲ್ಲಿ ಓದಿದ್ದೆ. ಯಾವುದು ನಿಜ, ಮತ್ತು ಯಾವುದು ಸುಳ್ಳು ಎಂದು ವಿಮರ್ಶಿಸಲಿಕ್ಕೆ ಹೋಗಲಿಲ್ಲ. ಗಂಗಾ ನದಿಯನ್ನು ನೋಡುತ್ತಿದ್ದರೇ ಬೇರೆ ಯಾವ ಯೋಚನೆಗಳು ಬರುತ್ತಿರಲಿಲ್ಲ.
ಮಾರನೆಯ ದಿನ ನಮ್ಮ ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು, ನಮ್ಮ ಕೆಲವು ಬಟ್ಟೆ-ಬರೆಗಳನ್ನು ಅಲ್ಲಿಯೇ ಒಂದು ರೂಮಿನಲ್ಲಿ ಬಿಟ್ಟು ನಮ್ಮ ಪ್ರಯಾಣ ಮುಂದುವರೆಯಿತು. ಗಂಗೋತ್ರಿಯಿಂದ ಗೋ-ಮುಖ ೧೪ ಕಿ.ಮಿ. ದೂರದ ಪ್ರಯಾಣ. ಅಲ್ಲಿಗೆ ಹೋಗಲು ಮನುಷ್ಯ ನಿರ್ಮಿತ ರಸ್ತೆ ಇರುವುದಾಗಿಯೂ, ಹೋಗುವುದು ಅಂತಹ ಕಷ್ಟವಿಲ್ಲವೆಂದು ನಮ್ಮ ಗೈಡು ನಮ್ಮಲ್ಲಿ ಧೈರ್ಯ ತುಂಬಿದ. ನಾವು ತಂದಿರುವ ಟೆಂಟು, ಸ್ಟೊವು, ಆಹಾರ ಸಾಮಗ್ರಿಗಳನ್ನು ಪೋರ್ಟರಿಗೆ ಕೊಟ್ಟು ನಮ್ಮ ಬಟ್ಟೆ-ಬರೆ, ಸ್ವಲ್ಪ ಮ್ಯಾಗಿ, ಡ್ರೈ-ಫ್ಹ್ರೂಟ್ಸ್ ನಮ್ಮ ಚೀಲದಲ್ಲಿ ತುಂಬಿಸಿಕೊಂಡು ನಾವು ಗಂಗೋತ್ರಿಯ ದೇವಾಲಯಕ್ಕೆ ನಮ್ಮ ಭೇಟಿ ಕೊಟ್ಟು, ನಮ್ಮ ಪ್ರಯಾಣ ಸುಖಕರವಾಗಿ ಆಗಲಿ ಎಂದು ಪ್ರಾಥಿಸಿ ಹೊರಟೆವು. ದಾರಿ ಕ್ರಮಿಸುತ್ತಿದ್ದಂತೆ ನಮ್ಮ ಬ್ಯಾಗುಗಳ ಭಾರ ಜಾಸ್ತಿ ಆಗುತ್ತಿರುವಂತೆ ಅನಿಸುತ್ತಿತ್ತು, ಏದುಸಿರು ಬಿಟ್ಟುಕೊಂಡು ಏರುಮುಖವಾಗಿ ಸಾಗುವುದು ಕಷ್ಟವಾಗುತ್ತಿತ್ತು. ಅಲ್ಲಲ್ಲಿ ವಿರಮಿಸುತ್ತಾ ನಾವು ನಿಧಾನಾವಾಗಿ ನೆಡೆಯತೊಡಗಿದೆವು. ಇದುವರೆಗೂ ನಮ್ಮ ಗುಂಪಿನ ಬಹಳಸ್ಟು ಜನ ಒಂದೇ ಬಾರಿಗೆ ೧೪ ಕಿ.ಮಿ. ನೆಡೆದಿರಲಿಲ್ಲ, ಅದೂ ಜೊತೆಗೆ ಸುಮಾರು ೭-೮ ಕೆ.ಜಿ. ತೂಕದ ಬ್ಯಾಗ್. ಅರ್ಧ ದಾರಿ ಕ್ರಮಿಸುವಸ್ಟರಲ್ಲಿ ಸುಸ್ತಾಗಿ ಹೋಗಿತ್ತು. ನಮ್ಮ ಭಾರದ ಹೆಜ್ಜೆಗಳನ್ನು ಹಾಕುತ್ತಾ, ಗೊ-ಮುಖದ ಸಮೀಪವಿರುವ ಭೊಜವಾಸದ ಬಾಬರ ಆಶ್ರಮ ತಲಪುವಸ್ಟರಲ್ಲಿ ಸಂಜೆಯಾಗಿತ್ತು. ನಮ್ಮ ಪ್ಲಾನಿನ ಪ್ರಾಕಾರ ನಾವು ಅಲ್ಲಿ ರಾತ್ರಿಯನ್ನು ಕಳೆದು, ಮರುದಿನ ಗೋ-ಮುಖದ ಗ್ಲೇಶಿಯರ ಬಳಿ ಹೋಗುವುದು. ಬಾಬಾರ ಆಶ್ರಮದಲ್ಲಿ ಬಿಸಿ ಬಿಸಿ ಚಾ ಕುಡಿದು ಸ್ವಲ್ಪ ವಿರಮಿಸಿದೆವು. ಅಲ್ಲಿ ೨ ರೂಮುಗಳಲ್ಲಿ ನಾವೆಲ್ಲಾ ಸೆಟೆಲ್ ಆದೆವು. ಅಲ್ಲಿಯ ದಪ್ಪನೆಯ ರಜಾಯಿಗಳನ್ನು ಹೊದ್ದುಕೊಂಡು ಮಲಗಿದರೆ ಏಳುವುದೇ ಬೇಡವೆನಿಸುತ್ತಿತ್ತು.
ಚಳಿಯ ಒಂದು ವಿಶೇಷವೇನೆಂದರೆ, ಓಡಾಡುತ್ತಿದ್ದರೆ ಅಂತಹ ಚಳಿಯನಿಸುವುದಿಲ್ಲ, ಅದೇ ಹಾಸಿಗೆಯಲ್ಲಿ ಹೊದ್ದುಕೊಂಡು ಮಲಗಿದರೆ, ಚಳಿ ಜಾಸ್ತಿ ಎನಿಸುತ್ತದೆ ಮತ್ತು ಎದ್ದರೆ ಅಸಾಧ್ಯ ಚಳಿಯಾಗಲು ತೊಡಗುತ್ತದೆ. ಬಾಬರವರ ಆಶ್ರಮದಲ್ಲಿ ಸಂಜೆ ೬:೩೦ ಗೆ ಊಟ. ನಮಗೋ ಅಸ್ಟು ದೂರ ನೆಡೆದು ಬಂದಿರುವ ಸುಸ್ತು, ಜೊತೆಗೆ ಆ ಚಳಿಯಲ್ಲಿ ರೂಮಿನಿಂದ ಹೊರಗೆ ಹೋಗುವುದೇ ಬೇಡವೆಂದೆನುಸುತ್ತಿದೆ, ಆದರೆ ತುಂಬಾ ಹಸಿವು. ಹೇಗೋ ಕಷ್ಟ ಪಟ್ಟು ಎದ್ದು ಊಟಕ್ಕೆ ಹೋದೆವು. ಅಲ್ಲೇ ಇರುವ ಜನ ಅರಾಮಾಗಿ ಒಂದು ಶರ್ಟು ಮತ್ತೆ ಪ್ಯಾಂಟು ಹಾಕಿಕೊಂಡು ನಾವು ನಮ್ಮ ಊರಿನಲ್ಲಿ ಇರುವ ತರ ಇದ್ದಾರೆ. ನಾವುಗಳು, ಜಾಕೇಟು, ಕಾಲುಚೀಲ ಹಾಕಿಕೊಂಡು ಗಡ ಗಡ ನಡಗುತ್ತಿದ್ದೇವೆ. ಊಟ ಮುಗಿಸಿ, ತಣ್ಣಗೆ ಕೊರೆಯುವ ನೀರಿನಲ್ಲಿ ತಟ್ಟೆ ತೊಳೆದು ಏಳುವ ಹೊತ್ತಿಗೆ, ಯಕಪ್ಪಾ ಈ ಟ್ರೆಕ್-ಗಿಕ್ ಎಲ್ಲಾ ಎಂದೆನಿಸತೊಡಗಿತ್ತು.
ರೂಮಿಗೆ ಬಂದು ಮಾತನಾಡುತ್ತಾ ಯಾವಾಗ ನಿದ್ದೆ ಬಂತೆಂದು ಗೊತ್ತೇ ಆಗಲಿಲ್ಲ. ಮಾರನೆಯ ದಿನ, ಬೆಳಗ್ಗೇ ಬೇಗನೇ ಎದ್ದು ನಮ್ಮ ಪ್ರಾತಃ ಕರ್ಮಗಳನ್ನ ಮುಗಿಸುವುದು ಒಂದು ಶಿಕ್ಷೆಯಾಗಿತ್ತು. ಸ್ನಾನವಂತೂ ನಮ್ಮ ಮನಸ್ಸಿನಲ್ಲೇ ಇರಲಿಲ್ಲ ಬಿಡಿ. ನೀರಿಗೆ ಕೈ ಹಾಕಿದರೆ, ಕೈ ಹಾಗೆ ಸೆಟೆದುಕೊಳ್ಳುತ್ತಿತ್ತು. ಹಾಗೇ ನಮ್ಮ ತಿಂಡಿ ಮತ್ತು ಚಾಗಳನ್ನು ಮುಗಿಸಿಕೊಂಡು ನಾವು ಅಲ್ಲಿಂದ ಗೋ-ಮುಖದ ಕಡೆ ನಮ್ಮ ಪ್ರಯಾಣವನ್ನು ಬೆಳೆಸಿದೆವು. ಅಂದ ಹಾಗೆ ಇನ್ನೊಂದು ವಿಷಯವನ್ನು ಹೇಳಲು ಮರೆತ್ತಿದ್ದೆ. ನಮ್ಮ ಜೊತೆ ಸ್ಪೇಯಿನಿಂದ ಬಂದ ಮನುಷ್ಯ ಅದು ಹೇಗೋ, ಪರ್ಮಿಟ್ ತೆಗೆದುಕೊಂಡು, ಅಲ್ಲೇ ಬಾಬಾರವರ ಆಶ್ರಮದಲ್ಲಿ ಬಂದಿದ್ದ. ನಮಗೆಲ್ಲಾ ಆಶ್ಚರ್ಯ, ಅವನು ಅಲ್ಲಿಂದ ಗೋ-ಮುಖಕ್ಕೆ ಹೋಗಿ ಅಲ್ಲಿ ಈಜು ಕೂಡ ಹೊಡೆದು ಬಂದೆ ಎಂದು ನಮಗೆ ಹೇಳಿದ. ನಾವು ಈ ಚಳಿಯಲ್ಲಿ ನೀರು ಮುಟ್ಟುವುದಕ್ಕೇ ಹಿಂದು ಮುಂದು ನೋಡುತ್ತಿರಬೇಕಾದರೆ, ಈಜುವುದೆಲ್ಲಾ ನಮ್ಮ ಊಹೇಗೂ ಮೀರಿದ್ದು.
ನಮ್ಮ ಗೋ-ಮುಖದ ದಾರಿಯಲ್ಲಿ ೧೦-೧೨ ಬಣ್ಣ ಬಣ್ಣದ ಟೆಂಟುಗಳನ್ನು ನೋಡಿದೆವು. ಅಲ್ಲೇಲ್ಲಾ ವಿದೇಶಿ ಪ್ರಾವಸಿಗಳು ಬಂದು ಇರುವರೆಂದು ನಮ್ಮ ಗೈಡು ನಮಗೆ ಹೇಳಿದ. ಅಲ್ಲಿಂದ ಹಾಗೆ ನೆಡೆದು ಹೋಗುತ್ತಿರುವಾಗ, ಗೈಡು ಇದೇ ಗೋ-ಮುಖ ಎಂದೊ ತೋರಿಸಿದ. ಅಲ್ಲಿ ಒಂದು ಸಣ್ಣ ಕಲ್ಲಿನ ಸುತ್ತಾ ಬಣ್ಣ ಬಣ್ಣದ ದ್ವಜಗಳನ್ನು ನೆಟ್ಟಿದ್ದಿದ್ದರು, ಅಲ್ಲಿಂದ ಅನತಿ ದೂರದಲ್ಲಿಯೇ ಪ್ರಖ್ಯಾತ ಗೋ-ಮುಖದ ಗ್ಲೇಶಿಯರ್ ಇರುವುದು. ಭಾರತದ ಅತ್ಯಂತ ಪವಿತ್ರ ನದಿಯ ಉಗಮ ಸ್ಥಾನ ನೋಡುತ್ತಾ ಮೈಮರೆತೆವು. ಅದೊಂದು ದೊಡ್ಡ ಗ್ಲೇಶಿಯರ್, ಅದರ ಅಡಿಯಿಂದ ಭಾಗಿರಥಿ ಹೊರ ಬರುತ್ತಿದ್ದಳು. ಬಿಳಿ ಮತ್ತು ಕಂದು ಬಣ್ಣದ ದೊಡ್ಡ ಹಿಮ ಗಡ್ದೆ, ಅದರ ಅಡಿಯಿಂದ ರಭಸವಾಗಿ ಹೊರ ಬರುವ ಭಾಗಿರಥಿಯನ್ನು ನೋಡುವುದೇ ಆಹ್ಲಾದಕರ ದೃಶ್ಯ. ಇದು ಹಿಂದೆಲ್ಲೋ ಭೂಮಿಯ ಒಳಗೆ ಹರಿದು ಬರುತ್ತಾ ಇಲ್ಲಿ ಹೊರಗೆ ಬರುತ್ತಿದೆ, ಹಾಗಾಗಿ ನಾವು ಇದನ್ನೇ ಉಗಮ ಸ್ಥಾನವೆನ್ನುತ್ತೆವೆ ಎಂದು ಅದರ ಬಗ್ಗೆ ನಮ್ಮ ಗೈಡು ವ್ಯಾಖ್ಯನಿಸಿದ. ನಮಗೂ ಆಗಲೇ ಅದರ ಅರಿವಾಗಿದ್ದು, ಅರೇ ಹೌದಲ್ವಾ, ನಮಗೆ ಇಲ್ಲಿ ಕಾಣಿಸುತ್ತಿದೆ, ಆದರೆ ಇದು ಎಷ್ಟೊ ದೂರದಿಂದ ಭೂಮಿಯ ಒಳಗೇ ಬಂದು ಇಲ್ಲಿಂದ ಹೊರ ಬರುತ್ತಿದೆ ಎಂಬ ಸತ್ಯ ನಮಗೆ ಅರಿವಾಯಿತು. ಅದರ ಜೊತೆಯಾಗಿಯೇ ಇಂತಹ ನಿಶ್ಕಲ್ಮಷ ನೀರನ್ನು ನಾವು ಮನುಷ್ಯರು ಯಾವ ಯಾವ ರೀತಿಯಲ್ಲಿ ಉಪಯೋಗಿಸಿ, ಇದನ್ನು ಹಾಳು ಮಾಡುತ್ತಿದ್ದೇವೆ ಎಂಬ ಭಾವನೆಯೂ ಮನದಲ್ಲಿ ಮೂಡಿ ಬಂತು. ಹಿಮಾಲಯದ ತಪ್ಪಲಿಂದ ಎಂದು ಹೇಳಿಕೊಂಡಿರುವ ಬಾಟಲಿನ ಕುಡಿಯುವ ನೀರು, ಈ ನದಿಯ ತೀರದಲ್ಲಿ ದೇಹ ದಹನ ಮಾಡಿ ಅರೆ ಬೆಂದ ದೇಹಗಳನ್ನು ಇದೇ ನದಿಯಲ್ಲಿ ಬಿಡುವುದು, ನದಿಯ ದಂಡೆಯ ಮೇಲಿರುವಾ ಊರುಗಳ ಕಲ್ಮಷಗಳನ್ನೇಲ್ಲಾ ಹೀರಿಕೊಂಡು ಈ ನದಿ, ಸಾವಿರಾರು ಕಿ.ಮಿ. ಹರಿದು ಸಮುದ್ರವನ್ನು ಸೇರುವ ಹೊತ್ತಿಗೆ, ಇದೇ ಪಾವಿತ್ರ್ಯತೆ ಕಾಪಾಡಿಕೊಂಡಿರುವುದೇ ಎಂಬ ಆಲೋಚನೆಯು ಸುಳಿಯಿತು.
ಭೋಜವಾಸ ಆಶ್ರಮ
ಗೋ-ಮುಖ್ ಗ್ಲೇಶಿಯರ್
ಭೋಜವಾಸ ಆಶ್ರಮ
ಗೋ-ಮುಖ್ ಗ್ಲೇಶಿಯರ್
ಅಲ್ಲಿಯವರೆಗಿನ
ನಮ್ಮ ಪಯಣ ಅಂತಹ ಕಷ್ಟದಾಯಕಾವಾಗಿಯೇನು ಇರಲಿಲ್ಲ, ಈ ರೀತಿಯ ನೆಡಿಗೆ ನಮ್ಮಲ್ಲಿ ಬಹಳ ಜನಕ್ಕೆ ಹೊಸದಾಗಿದ್ದರೂ,
ಅಲ್ಲಿಯ ವಾತವರಣದಿಂದ ಒಂದು ಬಗೆಯ ಹುಮ್ಮಸ್ಸು ನಮ್ಮೆಲ್ಲರನ್ನೂ ಆಯಾಸ ಮರೆಯುವಂತೆ ಮಾಡಿತ್ತು. ನನಗಂತೂ
ಯಾವುದೇ ರೀತಿಯ ಎಕ್ಸಪೆಕ್ಟೇಷನ್ ಇರಲಿಲ್ಲಾವಾದ್ದರಿಂದ ನನಗೆ ಎಲ್ಲಾವೂ ಹೊಸ ಅನುಭವವಾಗಿ ಕಾಣುತ್ತಿತ್ತು.
ಬೆಂಗಳೂರಿನ ಜಂಜಾಟದಲ್ಲಿ ದಿನವೂ ಓಡಾಡುತ್ತಿದ್ದ ನಮಗೆ, ಇಲ್ಲಿಯ ವಾತಾವರಣ ಹೊಸ ಹುಮ್ಮಸ್ಸನ್ನು ಕೊಡುತ್ತಿತ್ತು.
ಆ ದಿನದ ತನಕ ನಮ್ಮಲ್ಲಿ ಬಹಳ ಜನಕ್ಕೆ "ಗೇಶಿಯರ್" ಬಗ್ಗೆ ಓದಿ, ಕೇಳಿ, ಟಿ.ವಿ. ಯಲ್ಲಿ
ನೋಡಿ ಗೊತ್ತಿತ್ತೇ ಹೊರತು, ನಿಜವಾಗಿ ನಮ್ಮ ಕಣ್ಣೆದುರಿಗೆ ನೋಡಿ ಮುಟ್ಟಿ ಗೊತ್ತಿರಲಿಲ್ಲ.
ನಾವು ಈಗ ಗೋ-ಮುಖದಿಂದ
ತಪೋವನಕ್ಕೆ ಹೋರಟಿದ್ದೆವು, ಅಲ್ಲಿಯ ಹಾದಿ ನಮ್ಮನ್ನು ಪರೀಕ್ಷಿಸುವಂತೇಯೇ ಇತ್ತು, ನಾವು ನಮ್ಮ ಎಲ್ಲಾ
ಶಕ್ತಿಯನ್ನು ಹಾಕಿ, ನೆಡೆಯುತ್ತಿದ್ದೆವು. ಅದು ಕಡಿದಾದ ಬೆಟ್ಟವನ್ನು ಹತ್ತಬೇಕಾದ ರೀತಿಯ ತರ, ನಮ್ಮ
ಎದುರಿಗೆ ಒಂದು ಗೋಡೆಯ ರೀತಿಯಲ್ಲಿತ್ತು. ಅಲ್ಲಿ ಎರಡು ಕಾಲು ಹಾದಿಗಳು ಕಾಣುತ್ತಿದ್ದವು, ಒಂದು ರಸ್ತೆ
ಒಂದು ಝರಿಯ ಪಕ್ಕದಲ್ಲಿ ಹೊಗುತ್ತಿತ್ತು ಅದರ ಪಕ್ಕದಲ್ಲಿ ಒಂದು ಆರೋ-ಮಾರ್ಕ್ ಕೂಡ ಇತ್ತು. ಇನ್ನೊಂದು
ಕಾಲು ದಾರಿಯಲ್ಲಿ ಯಾವುದೇ ರೀತಿಯ ಗುರುತುಗಳು ಕಾಣುತ್ತಿರಲಿಲ್ಲ. ನಮ್ಮ ಗೈಡು ಮತ್ತು ಪೋರ್ಟರಗಳು
ಆ ಹೊತ್ತಿಗೇ ಆಗಲೇ ನಮ್ಮಿಂದ ದೂರ ಹೋಗಿದ್ದರು, ಅಲ್ಲಿ ಎರಡು ಕಾಲು ದಾರಿಗಳಲ್ಲಿ ನಾವು ಯಾವುದರಲ್ಲಿ
ಹೋಗುವುದೆಂದು ಚರ್ಚೆ ಮಾಡುತ್ತಿದ್ದೆವು. ನಾನು ಝರಿಯ ಪಕ್ಕದ ದಾರಿಯೇ ಸರಿ ಎಂದು, ಇನ್ನೊಬ್ಬ ಇಲ್ಲ,
ಇನ್ನೊಂದು ದಾರಿಯಲ್ಲಿ ನಾನು ಗೈಡು ಹೋಗುವುದು ನೋಡಿದೆ ಎಂದ.
ನಾನು ಅಷ್ಟರಲ್ಲಿ
ಝರಿಯ ಪಕ್ಕದ ದಾರಿಯಲ್ಲಿ ಹತ್ತಲು ಪ್ರಾರಂಭಿಸಿದ್ದೆ, ಉಳಿದವರು ಇನ್ನೊಂದು ದಾರಿಯಲ್ಲಿ ಹೊರಟಿದ್ದರು.
ನಾನಗೆ ಅರ್ಧ ದಾರಿಯ ಮುಂದೆ ಹೇಗೆ ಹೋಗುವುದು ಎಂದು ಗೊತ್ತಾಗಲೇ ಇಲ್ಲ, ಆಯಾಸವಾಗಿ ಅಲ್ಲಿಯೇ ಇದ್ದ
ಒಂದು ಕಲ್ಲಿನ ಮೇಲೆ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದೆ. ಆಗ ಕೆಳಗೆ ನೋಡಿದರೆ, ಇಲ್ಲಿಯ ತನಕ ಈ
ಭಾರದ ಬ್ಯಾಗು ಹೊತ್ತಿಕೊಂಡು ನಾನು ಹೇಗೆ ಹತ್ತಿದೆ ಎಂದು ವಿಸ್ಮಯವಾಯಿತು. ಅದಕ್ಕೆ ತಕ್ಕದಾಗಿ ನಾನು
ಹೋಗುತ್ತಿದ್ದ ದಾರಿ ತಪ್ಪೆಂದು, ನಾನು ಉಳಿದವರು ಹೋಗುತ್ತಿರುವ ದಾರಿಯಲ್ಲೇ ಹೋಗಬೇಕೆಂದು ಗೊತ್ತಾಯಿತು,
ಆಗ ನನ್ನನ್ನು ನಾನು ಎಷ್ಟು ಹಳೆದುಕೊಂಡೆನೋ ಅದು ನನಗೇ ಗೊತ್ತು. ನಂತರದ ಹಾದಿ, ನಾನು ಯಾಕಾದರೂ ಇಲ್ಲಿಗೆ
ಬರಲು ಒಪ್ಪಿಕೊಂಡೆನೋ ಎನ್ನುವ ರೀತಿಯಿತ್ತು. ನಾವು ಮುಕ್ಕಾಲು ಹಾದಿ ಸವೆಸಿದರೂ ನಮಗೆ ಗೈಡಾಗಲೀ, ಪೋರ್ಟರುಗಳಾಗಲೀ
ಕಾಣಿಸಲಿಲ್ಲ, ನಾವುಗಳು ಅವರನ್ನು ಬೈದುಕೊಳ್ಳುತ್ತಾ ಅಲ್ಲಲ್ಲೇ ವಿರಮಿಸಿಕೊಳ್ಳುತ್ತಾ ನಿಧಾನವಾಗಿ
ಹತ್ತುತ್ತಿದ್ದೆವು. ಆಗ ಸಡನ್ ಆಗಿ ನಮಗೆ ಅವರುಗಳ ಮಾತಿನ ಶಬ್ದ ಕೇಳಿಸಿತು, ಅವರುಗಳು ಆಗಲೇ ಸಾಮಾನುಗಳನ್ನ
ಮೇಲಿಟ್ಟು ನಮ್ಮಗಳ ಬ್ಯಾಗುಗಳನ್ನ ತೆಗೆದುಕೊಂಡು ಹೋಗಲು ಬಂದಿದ್ದರು. ನಮ್ಮಲ್ಲಿ ಕಲವರು ನಮ್ಮ್ ಬ್ಯಾಗುಗಳನ್ನ
ಅವರ ಹವಾಲಿ ಮಾಡಿ ನಿಧಾನವಾಗಿ ನೆಡೆದುಕೊಂಡು ಹೊರಟೆವು.
ಅಲ್ಲಿಂದ ನಾವು
ನಿಧಾನವಾಗಿ ತಲುಪಿದ ಜಾಗವೇ "ತಪೋವನ", ಅಲ್ಲಿ ಒಬ್ಬ ಮಾತಾಜಿ ನೆಲೆಸಿದ್ದರು, ಅವರು ನಮ್ಮನ್ನೆಲ್ಲಾ
ನೋಡಿ ಸಂತೋಷ ವ್ಯಕ್ತ ಪಡಿಸಿದರು. ನಾವುಗಳು ಅಲ್ಲಿಯೇ ನಮ್ಮ ಟೆಂಟುಗಳನ್ನು ಹಾಕಿ, ರಾತ್ರಿ ಊಟದ ತಯಾರಿ
ನಡೆಸಿದೆವು. ಸೂರ್ಯ ಅಸ್ತಮಿಸುತ್ತಿದ್ದೆಯಂತೆ ಅಲ್ಲಿ ಅಸಾಧ್ಯ ಚಳಿ ಶುರುವಾಯಿತು. ನನಗೆ ಈ ಚಾರಣದಲ್ಲಿ
ಇದ್ದ ಕುತೂಹಲವೆಂದರೆ, ನಾವೆಲ್ಲಾ ಗಡ ಗಡ ನಡಗುತ್ತಿರಬೇಕಾದರೆ, ಗೈಡು ಮತ್ತೆ ಪೋರ್ಟರುಗಳು ಅರಾಮಾಗಿ ಮಾಮುಲು ವಾತವರಣದಂತೆ ಇದ್ದಿದ್ದು,
ಈಗ ಆ ಗುಂಪಿಗೆ ಆ ಮಾತಾಜಿಯವರು ಸೇರಿದ್ದರು. ಅವರ ಹೆಸರು "ತಾರಾ ಮಾತಜಿ", ಅವರು ಇಲ್ಲಿ
ಸುಮಾರು ವರುಶಗಳಿಂದ ನೆಲೆಸಿದ್ದಾಗಿ ತಿಳಿದು ಬಂತು. ವರ್ಷದ ೬ ತಿಂಗಳು ಇಲ್ಲಿ ತಪೋವನದಲ್ಲಿ ಮತ್ತು
ಉಳಿದ ೬ ತಿಂಗಳು ಹಿಮಪಾತವಾಗುವಾಗ ಗಂಗೋತ್ರಿಯ ಸುತ್ತ ಮುತ್ತ ಇರುತ್ತಾರಂತೆ. ಅವರ ಜೊತೆಯ ಮಾತುಕತೆಯಲ್ಲಿ
ತಿಳಿದು ಬಂದ ಸುದ್ದಿಯೇನೆಂದರೆ, ಅವರು ಬಂಗಾಳದವರು ಹಾಗು ತುಂಬಾ ವರ್ಷಗಳ ಹಿಂದೆಯೇ ಅವರು ಸನ್ಯಾಸತ್ವ
ಸ್ವೀಕರಿಸಿ, ಸುಮಾರು ಕಡೆ ಓಡಾಡಿ, ಈಗ ತಪೋವನದಲ್ಲಿ ನೆಲೆಸಿದ್ದಾರೆಂದು. ಅವರು ಇಲ್ಲಿಗೆ ಬಂದಾಗಿನಿಂದ
ತಮ್ಮ ಊರಿಗೆ ಹೋಗಿಲ್ಲವೆಂದೂ ಮತ್ತು ಅವರ ಕುಟುಂಬದ ಯಾವುದೇ ವಿಶಯವೂ ಗೊತ್ತಿಲ್ಲದೇ ಇರುವುದು. ಈ ಮೊಬೈಲ್
ಯುಗದಲ್ಲಿ, ನಾವು ೧ ಗಂಟೆಯ ಪ್ರಯಾಣ ಮಾಡಿ ನಮ್ಮವರಿಗೆ ನಾವು ಆರಾಮಾಗಿ ತಲುಪಿದೆವು ಎಂದು ತಿಳಿಸುವಾಗ,
ವರ್ಷಗಟ್ಟಲೇ ಯಾವುದೇ ರೀತಿಯ ಸಂಪರ್ಕ ಇಲ್ಲದೇಯೇ ಬದುಕುವುದು ನನ್ನ ಪಾಲಿಗೆ ದೊಡ್ಡ ಸಾಧನೆಯೇ ಹೌದು.
ಅವರ ಸ್ವಭಾವ
ಬಹಳ ಸೌಮ್ಯ ಹಾಗು ಮಾತುಗಳು ಸ್ವಲ್ಪ ಕಡಿಮೆಯೇ, ಅವರು ಒಂದು ಹತ್ತಿಯ ಸೀರೆ ಮತ್ತು ಒಂದು ಸ್ವೆಟರ್
ಧರಿಸುತ್ತಿದ್ದರು. ದಿನ ಪ್ರತಿ, ಅವರು ಅಲ್ಲಿ ಸ್ನಾನ ಮಾಡಿ ಜಪ ತಪ ಮಾಡುತ್ತಿದ್ದರು. ಅವರು ಹೇಳಿದ್ದು,
ತಪೋವನದಲ್ಲಿ, ಇನ್ನೊಬ್ಬ ಮಾತಾಜಿ ಹಾಗು ಒಬ್ಬ ಸ್ವಾಮಿಜಿ ಇರುತಾರೆಂದು. ಈಗ ಇರುವುದು ಅವರ ಮೂರನೇ
ಜಾಗವಂತೆ ತಪೋವನದಲ್ಲೇ. ಅರಣ್ಯ ಇಲಾಖೆಯವರು ಆಗಾಗ ಬಂದು ಇಲ್ಲಿರಬೇಡಿ ಎಂದು ಕಿರುಕುಳ ಕೊಡುತ್ತಾರಂತೆ.
ಈಗ ಅವರು ಒಂದು ಬಂಡೆಯ ಪಕ್ಕದಲ್ಲಿ ಕಲ್ಲುಗಳನ್ನು ಜೋಡಿಸಿಕೊಂಡು ಒಂದು ಜೋಪಡಿಯ ತರ ಕಟ್ಟಿಕೊಂಡು ವಾಸ
ಮಾಡುತ್ತಿದ್ದಾರೆ. ಅದರ ಪಕ್ಕದಲ್ಲಿ ಇನ್ನೊಂದಿಷ್ಟು ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಒಂದು ತಾಡಪಾಲು
ಹೊದೆಸಿದ್ದಾರೆ. ಹೀಗೆ ಮಾತನಾಡುವಾಗ ಅಲ್ಲಿಗೆ, ಇನ್ನೊಬ್ಬ ಮಾತಾಜಿಯ ಆಗಮನವಾಯಿತು.
ಅವರ ಹೆಸರು
"ನಿರ್ಮಲಾ ಮಾತಾಜಿ", ಅವರು ಬೆಂಗಳೂರಿನವರಂತೆ. ಅವರು ಬಂದ ಕೂಡಲೇ ನಮ್ಮನ್ನೆಲ್ಲಾ ಮಾತನಾಡಿಸತೊಡಗಿದರು.
ನಾವು ಯಾರು ಯಾರು, ಏನು ಮಾಡ್ತಾ ಇದೀವಿ, ಈಗ ಯಾವ ಯಾವ ಜಾಗಕ್ಕೆ ಹೋಗಬೇಕೆಂದುಕೊಂಡಿದ್ದೇವೆ, ಎಲ್ಲವೂ
ವಿಚಾರಿಸಿಕೊಂಡೆವು. ನಾನು ಮತ್ತು ಸುಧಿ ಅವರನ್ನು ಮಾತನಾಡಿಸತೊಡಗಿದೆವು. ಅವರು ತಮ್ಮ ಯೌವನದಲ್ಲಿ
ಬೆಂಗಳೂರು ತೊರೆದು, ಕನ್ಯಾಕುಮಾರಿಯಲ್ಲಿ ವಿವೇಕಾನಂದ ಮಿಶನಿನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರಂತೆ,
ಅವರಿಗೆ ಬಾಲ್ಯದಿಂದಲೂ ಆಧ್ಯತ್ಮದ ಕಡೆ ಒಲವಿತ್ತಂತೆ, ಕನ್ಯಾಕುಮಾರಿಯಲ್ಲಿ ಅವರ ಆಧ್ಯಾತ್ಮದ ದಾಹ ಇಂಗದಿದ್ದರಿಂದ,
ಅವರು ಬೇರೆ ಹಲವೆಡೆ ತಿರುಗಿ, ಕೊನೆಗೆ ತಪೋವನದಲ್ಲಿ ಇದ್ದಾರಂತೆ. ಅವರಿಗೆ ಇಲ್ಲಿಯ ವಾತಾವರಣ ತುಂಬಾ
ಹಿಡಿಸಿದೆಯೆಂದು ಇಲ್ಲಿ ಅವರು ಸಂತೋಷದಿಂದ ಇದ್ದಾರೆಂದು ಹೇಳಿದರು.
ಸುತ್ತಲಿನ ಪರಿಸರ,
ಪರಿಸರದ ಜೊತೆ ಮಾನವನ ಜೀವನ, ಇದೆಲ್ಲದರ ಬಗೆಗೆ ಚೆನ್ನಾಗಿ ಮಾತನಾಡಿದರು. ಸ್ವಭಾವದಿಂದ ಅವರು ಸ್ವಲ್ಪ
ಮಾತು ಜಾಸ್ತಿ ಎಂದೆನಿಸಿತು. ಆದರೆ ಅಲ್ಲಿ ಸುತ್ತಲಿನ ಜಾಗದಲ್ಲಿ ಕೇವಲ ೩ ಜನ, ಪ್ರತಿ ಒಬ್ಬರೂ ಇನ್ನೊಬ್ಬರಿಂದ
ಸುಮಾರು ೨-೩ ಕಿ.ಮಿ. ದೂರದಲ್ಲಿ ನೆಲೆಸಿದ್ದಾರೆ, ಯಾರು ಯಾರ ಜೊತೆಯೂ ಅವಶ್ಯಕತೆಗಿಂತಾ ಜಾಸ್ತಿ ಮಾತಾನಾಡುವುದೆಲ್ಲವಂತೆ,
ಹಾಗೆಯೇ ದಿನಂಪ್ರತಿ ಒಬ್ಬರಿಗೆ ಒಬ್ಬರು ಸಿಗುವುದೂ ಇಲ್ಲವಂತೆ. ಈ ತರದ ಜೀವನ ನಮ್ಮಗಳಿಗೇ ಊಹಿಸುವುದೂ
ಸಾಧ್ಯವಿಲ್ಲವೆಂದೆನೆಸಿತು.
ನಿರ್ಮಲಾರವರು
ತಾರರವರಿಗೆ, ಆ ಸ್ವಾಮಿಜಿ ಹಿಂತಿರುಗಿ ಬಂದರೆಂದು ಕೇಳಿದರು, ಇವರು ಗೊತ್ತಿಲ್ಲವೆಂದು ಉತ್ತರಿಸಿದಾಗ,
ನಿರ್ಮಲಾ ಮಾತಜಿಯವರು ನಮ್ಮ ಕಡೆ ತಿರುಗಿ, ನೋಡಿ ನಾವುಗಳು ನಮಗೆ ಯಾವ ರೀತಿಯ ಬಂಧನ, ಅಟ್ಟ್ಯಾಚಮೆಂಟ್
ಬೇಡವೆಂದು ಇಲ್ಲಿ ಬಂದು ಎಷ್ಟೊ ವರುಷ ತಪ್ಪಸ್ಸಿನ ತರ ಮಾಡುತ್ತಾ ಇದ್ದೇವೆ, ಆದರೆ ಇಲ್ಲಿ ಇರುವ ಒಬ್ಬರು
ಹೋದವರು ಬರುವುದು ತಡವಾದರೆ, ಏನಾಯಿತೋ ಎಂದು ವಿಚಾರಿಸುತ್ತೇವೆ. ಈ ಎಲ್ಲಾ ಮನಸ್ತಿಥಿಯಿಂದ ಹೊರಬರಲು
ಇನ್ನು ಎಷ್ಟು ವರುಷಗಳು ಸಾಧನೆ ಮಾಡಬೇಕೋ ಎಂದು ನಗು ನಗುತ್ತಾ ನಮಗೆ ಮಾರನೆಯ ದಿನ ಅವರ ಕುಟೀರದ ಹತ್ತಿರ
ಬರಲು ಹೇಳಿ ಹೊರಟರು.
ನಾವುಗಳು ತಪೋವನದಲ್ಲಿ
ಟೆಂಟು ಹಾಕಿದ ಜಾಗ ಶಿವಲಿಂಗ ಬೆಟ್ಟದ ಬುಡದಲ್ಲಿ. ನಾವು ಸಂಜೆ ಬಂದಾಗ ಅದರ ತುದಿ ಮಾತ್ರವೇ ಕಂಡಿತ್ತು,
ಉಳಿದಿದ್ದೆಲ್ಲಾ ಮೋಡದಲ್ಲಿ ಮುಚ್ಚಿ ಹೋಗಿತ್ತು. ಮಾರನೆಯ ದಿನ ಬೆಳಗ್ಗೆ ಬೇಗ ಎದ್ದು ಶಿವಲಿಂಗದ ದರ್ಶನ
ಮಾಡುವುದೆಂದು ಮಾತನಾಡಿಕೊಂಡೆವು. ನಾವು ಉಳಿದುಕೊಂಡ ಜಾಗದ ಪಕ್ಕವೇ ಒಂದು ಝರಿ, ಅದರಿಂದ ಸ್ವಲ್ಪ ಪಕ್ಕದಲ್ಲಿ
ಮಾತಾಜಿಯವರ ಕುಟೀರ, ಕುಟೀರದ ಎದುರಿಗೆ ನಮ್ಮ ಟೆಂಟುಗಳು. ಝರಿಯ ಜುಳು ಜುಳು ಶಬ್ದ ಬಿಟ್ತರೆ ಬೇರೇ
ಏನೂ ಯಾವುದೇ ಶಬ್ದವಿಲ್ಲ, ಒಟ್ಟಿನಲ್ಲಿ ಒಂದು ಕನಸಿನ ಲೋಕದಲ್ಲಿದ್ದಂತೆ ಭಾಸವಾಗುತ್ತಿತ್ತು. ಆಗಲೇ
ಯಾರೋ ಕೂಗಿದರು, ರಾತ್ರಿಯ ಊಟಕ್ಕೇ ಏನ್ರೋ ಅಂತ, ಕೂಡಲೇ ಕಲ್ಪನಾ ಲೋಕದಿಂದ ವಾಸ್ತವಕ್ಕೆ ಬಂದೆ. ನಾವುಗಳು
ತಂದಂತ ಅಕ್ಕಿ, ಗೋಧಿ ಹಿಟ್ಟಿನಲ್ಲಿ ಏನೊ ಸ್ವಲ್ಪ ತಯಾರಿಸಿ, ರಾತ್ರಿಯ ಊಟ ಮುಗಿಸಿ, ಬೆಳಗ್ಗೆ ಶಿವಲಿಂಗದ
ದರ್ಶನದ ಬಗ್ಗೆ ಮಾತನಾಡುತ್ತಾ, ಇಸ್ಪೀಟು ಆಟ ಆಡಿ ಟೆಂಟಿನ
ಒಳಗೆ ಸ್ಲೀಪಿಂಗ್ ಬ್ಯಾಗಿನಲ್ಲಿ ಮಲಗಿದೆವು. ಸಂಜೆ ಸಣ್ಣದಾಗಿ ಶುರುವಾದ ಮಳೆ ರಾತ್ರಿಯೆಲ್ಲಾ ಸುರಿಯಿತು.
ಮಾರನೆಯ ದಿನ
ಬೆಳಗ್ಗೆ ಬೇಗ ಎದ್ದೆವು, ಹಿಂದಿನ ರಾತ್ರಿಯ ಮಳೆಯಿಂದ ಮೋಡಗಳು ಕರಗಿ ಶಿವಲಿಂಗದ ಸಂಪೂರ್ಣ ದರ್ಶನವಾಗಬಹುದೆಂದು
ಆಸೆಯಿತ್ತು. ಆದರೆ ಮೋಡಗಳು ಪೂರ್ತಿಯಾಗಿ ಕರಗಿರಲಿಲ್ಲ ಹಾಗಾಗಿ ನಮಗೆ ಪೂರ್ತಿಯಾಗಿ ಶಿವಲಿಂಗವು ಕಾಣುತ್ತಿರಲಿಲ್ಲ,
ಆದರೆ ಕಂಡಿದ್ದ ದೃಶ್ಯ ಮಾತ್ರ ಅದ್ಭುತವಾಗಿತ್ತು.
ಅದನ್ನು ನೋಡುತ್ತಾ ನಮ್ಮನ್ನು ನಾವೇ ಮರೆತೆವು, ಹಿಂದಿನ ರಾತ್ರಿಯ ಚಳಿಯಲ್ಲಿ ನಡಗಿದ್ದು, ಮೊದಲ ಬಾರಿಗೆ
ಸ್ಲೀಪಿಂಗ್ ಬ್ಯಾಗಿನಲ್ಲಿ ಮಲಗಿ, ಸರಿಯಾಗಿ ನಿದ್ದೆ ಬಾರದೇ ಇದ್ದಿದ್ದು ಯಾವುದೂ ಕೂಡಾ ನಮ್ಮ ಮನಸ್ಸಿನಲ್ಲಿ
ಬರಲಿಲ್ಲ, ಅಷ್ಟು ರಮಣೀಯವಾಗಿದ್ದ ದೃಷ್ಯ ಅದು. ನಂತರ ಪ್ರಾತಃ ಕರ್ಮಗಳನ್ನು ಮುಗಿಸಿಕೊಂಡು, ಮ್ಯಾಗಿ
ಮಾಡಿಕೊಂಡು ತಿಂದು, ಅಂದಿನ ನಮ್ಮ ಪ್ರಯಾಣ "ಕೀರ್ತಿ-ಭಾಮಕ್" ನೋಡಲು ಹೊರಟೆವು.
ಭಾಗಿರಥಿ ಪರ್ವತಗಳು
ಮಾತಾ ತಾರ ಅವರ ಆಶ್ರಮ
ಶಿವಲಿಂಗ್ ಪರ್ವತ
ಭಾಗಿರಥಿ ಪರ್ವತ ಶ್ರೇಣಿ
ಭಾಗಿರಥಿ ಪರ್ವತಗಳು
ಮಾತಾ ತಾರ ಅವರ ಆಶ್ರಮ
ಶಿವಲಿಂಗ್ ಪರ್ವತ
ಭಾಗಿರಥಿ ಪರ್ವತ ಶ್ರೇಣಿ
To be Contd...