Monday, March 19, 2012

One Such Travelogue


ನಾವು ದೆಹಲಿ ತಲುಪಿದಾಗ ಸಂಜೆ ೭:೩೦, ಅಲ್ಲಿಂದ ಹರಿದ್ವಾರಕ್ಕೆ ನಮಗೆ ರಾತ್ರಿ ೧೦ ಘಂಟೆಗೆ ಟ್ರೈನ್. ನಮ್ಮ ಲಗೇಜು ತಗೆದುಕೊಂಡು, ೨ ಟಾಕ್ಸಿ ಮಾಡಿಕೊಂಡು ರೈಲ್ವೇ ಸ್ಟೇಷನಿಗೆ ಹೊರಟೆವು. ದೆಹಲಿಯ ಸಂಜೆಯ ಟ್ರಾಫಿಕ್ ದೇವರಿಗೇ ಪ್ರೀತಿ. ರಾಷ್ತ್ರದ ರಾಜಧಾನಿಯ ವಾಹನಗಳನ್ನು ನೋಡುತ್ತಾ, ಅವುಗಳ ಮೇಲಿರುವ ಸ್ಚ್ರಾಚುಗಳನ್ನ ನೋಡುತ್ತಿದ್ದರೆ, ಅಲ್ಲಿಯ ಡ್ರೈವಿಂಗ್ ಹೇಗಿದೆಯೆಂದು ಊಹಿಸಬಹುದು. ರಾಜಧಾನಿಯ ಅಗಲವಾದ ರಸ್ತೆಗಳು, ಅವುಗಳ ಮೇಲೆ ರಸ್ತೆ ತುಂಬ ಸಣ್ಣದು ಎನ್ನಿಸುವಂತೆ ಎಲ್ಲೆಡೆಯು ಚಲಿಸುತ್ತಿರುವ, ಟ್ರಾಫಿಕ್ ಸಿಗ್ನಲ್ ನಲ್ಲಿ ಉದ್ದಕೆ ನಿಂತಿರುವ ವಾಹನಗಳನ್ನು ನೋಡುತ್ತಾ, ನಮ್ಮ ಪಯಣ ನಿಜಾಮುದ್ದೀನ್ ರೈಲ್ವೇ ನಿಲ್ದಾಣದ ಕಡೆಗೆ ಹೊರಟಿತು. ನಾವು ಇರುವುದು ೮ ಜನ, ಲಗೇಜು ಇರುವುದು ನೋಡಿದರೆ, ೧೨-೧೩  ಬ್ಯಾಗುಗಳು, ಕೆಲವೋ ಹೆಣ ಭಾರ. ನಮ್ಮ ಟ್ರೆಕಿಂಗಿಗೆ ಬೇಕಾದ ಟೆಂಟುಗಳು, ಆಹಾರ, ನಮ್ಮ ಬಟ್ಟೆ-ಬರೆ, ದಪ್ಪನೆ ಜಾಕೆಟುಗಳು, ಸ್ವೆಟರು, ಸ್ಲೀಪಿಂಗ್ ಬ್ಯಾಗುಗಳು, ಹೀಗೆ ಎಲ್ಲ ಸೇರಿ ಭಾರ ಜಾಸ್ತಿಯಾಗಿತ್ತು. ಯಾವುದನ್ನು ತೆಗೆದು ಹಾಕೊ ಹಾಗಿಲ್ಲ, ಎಲ್ಲವೂ ಬೇಕಾಗಿರುವ ವಸ್ತುಗಳೇ. ಇದನ್ನೆಲ್ಲಾ ಹೊತ್ತುಕೊಂಡು ಹೇಗಪ್ಪ ಬೆಟ್ಟ ಹತ್ತೊದು ಎಂಬ ಯೋಚನೆ ಬಂದಾಗೆಲ್ಲಾ ಹೆದರಿಕೆಯಾಗುತ್ತಿತ್ತು. ಆದರೆ ಏನು ಮಾಡೋದು, ಹೊರಟಾಗಿದೆ, ಇನ್ನು ಏನು ಕಷ್ಟವೋ, ಸುಖವೋ ಮುಗಿಸಿಕೊಂಡು ಬರೋದೆ ಅಂತ ನನಗೆ ನಾನೇ ಧೈರ್ಯ ತುಂಬಿ ಕೊಳ್ಳುತ್ತಾ ಇದ್ದೆ. ಜೊತೆಗೆ ಕಳೆದ ಒಂದುವರೆ ತಿಂಗಳಿನಿಂದ ಪ್ರತಿದಿನ ಜಿಮ್ ಗೆ ಹೋಗಿ, ಸ್ವಲ್ಪ ಶಕ್ತಿ ಬಂದಿದೆ ಬೆಟ್ಟ ಹತ್ತೊದಕ್ಕೆ ತುಂಬಾ ಕಷ್ಟ ಆಗಬಾರದು ಅಂದುಕೊಂಡೆ.
ಇದೇ ಯೋಚನೆಯಲ್ಲಿ ಏನು ಊಟ ಮಾಡಿದೆನೊ, ಏನೇನು ಮಾತಾಡಿದೆನೋ....ಸೆಂತಿಲ್ ಸೆಕೆಂಡ್ ಎ.ಸಿ.ಬುಕ್ ಮಾಡಿದ್ದ. ಟ್ರೈನ್ ಹತ್ತಿ ಮಲಗಿದ ಕೆಲವೇ ಸಮಯದಲ್ಲಿ ಯಾರೋ ಬಂದು ಎಬ್ಬಿಸಿದರು, ನೋಡಿದರೆ ಆಗಲೇ ಹರಿದ್ವಾರ ಬಂದಿತ್ತು.

ನಿದ್ದೆ ಕಣ್ಣಲ್ಲೇ ಎಲ್ಲಾ ಲಗೇಜು ಇಳಿಸಿಕೊಂಡು ಸುತ್ತಲೂ ನೊಡಿದೆವು, ಎಲ್ಲಾ ಕಡೆಯು ಬರೀ ಸಾಧುಗಳೇ ಕಂಡರು. ರೈಲ್ವೇ ನಿಲ್ದಾಣದ ತುಂಬೆಲ್ಲಾ ಸಾಧುಗಳು ಮಲಗಿದ್ದಾರೆ, ಪಕ್ಕದಲ್ಲಿ ಕಮಂಡಲ, ಬಟ್ಟೆಯ ಒಂದು ಚೀಲ. ಎಲ್ಲಾರು ಜಟಾಧಾರಿಗಳು,ಕೆಲವರು ಅಲ್ಲಲ್ಲಿ ಕೂತು ಬೀಡಿ ಸೇದುತ್ತಿದ್ದರು. ಅಷ್ಟೊಂದು ಸಾಧುಗಳನ್ನು ಒಟ್ಟಿಗೆ ನೋಡಿದ್ದು ನಾನು ಅದೇ ಮೊದಲು. ಅವರ ಕೊಳಕು ಬಟ್ಟೆಗಳು, ಸ್ನಾನವಿಲ್ಲದೆ ವಾಸನೆ ಬರುವ ದೇಹ, ತಂಬಾಕು ಹಾಕಿ ಕಪ್ಪಾಗಾಗಿರುವ ಹಲ್ಲುಗಳು, ಎಲ್ಲಾ ಸೇರಿ ಏನೋ ವಿಚಿತ್ರ ಭಾವನೆಗಳು ಬರಲಿಕ್ಕೆ ಪ್ರಾರಂಭವಾಯಿತು. ಇವರ ಜೀವನದ ಧ್ಯೇಯವೇನು, ಇವರು ಏನನ್ನು ಸಾಧಿಸಬೇಕೆಂದಿದ್ದಾರೆ, ಜೀವನ ಹೇಗೆ ಸಾಗಿಸಬೇಕೆಂದಿದ್ದಾರೆ, ಹೀಗೇ ನೂರೆಂಟು ಯೋಚನೆಗಳು. ಹಾಗೆ ಯೋಚನೆ ಮಾಡುತ್ತಾ, ಹೊರಗೆ ಹೊರಟೆ.

ಹರಿದ್ವಾರದಿಂದ ಬಸ್ಸಿನಲ್ಲಿ ರಿಶಿಕೇಷಕ್ಕೆ ಹೋಗಿ, ಅಲ್ಲಿಂದ ಟಾಟ ಸುಮೋ ಬುಕ್ ಮಾಡಿಕೊಂಡು ಉತ್ತರಕಾಶಿಯ ಕಡೆ ಪ್ರಯಾಣ ಬೆಳೆಸಿದೆವು. ರುಶಿಕೇಷದಲ್ಲಿ ಸ್ಪೇನ್ ದೇಶದ ಒಬ್ಬನ ಪರಿಚಯವಾಯಿತು, ಅವನು ಕೂಡ ಗಂಗೋತ್ರಿಗೆ ಹೋಗಬೇಕಾಗ್ಗಿದ್ದರಿಂದ, ಅವನು ಕೂಡ ನಮ್ಮ ಜೊತೆಗೆ ಹೊರಟ. ರುಶಿಕೇಶದಿಂದ ಉತ್ತರಕಾಶಿಯ ಪ್ರಯಾಣ ತುಂಬಾ ಆಹ್ಲಾದಕರವಾಗಿತ್ತು. ಪ್ರಕ್ರುತಿಯ ಸೌಂದರ್ಯ ರೌದ್ರರಮಣೀಯ, ನಮ್ಮ ಪ್ರಯಾಣ ಅಲ್ಲಲ್ಲಿ ನಿಂತು, ಸೌಂದರ್ಯವನ್ನು ಆಹ್ಲಾದಿಸುತ್ತಾ ನಿಧಾನವಾಗಿ ಪ್ರಾರಂಭವಾಯಿತು.ತೆಹ್ರಿ ಜಲಾಶಯವನ್ನು ಮೇಲಿಂದ ನೋಡುತ್ತಾ, ರಮಣೀಯ ದೃಶ್ಯಗಳನ್ನು ಸವಿಯುತ್ತಾ, ತುಂಬು ಉತ್ಸಾಹದಲ್ಲಿ ನಮ್ಮ ಪ್ರಯಾಣ ಮುಂದುವರೆಯಿತು. ದಾರಿಯಲ್ಲಿ ಗೊತ್ತಾದ ವಿಷಯವೇನೆಂದರೆ, ಆ ಸ್ಪೇನಿನ ಮನುಷ್ಯ ಕಳೆದ ಒಂದುವರೆ ತಿಂಗಳಿಂದ, ಭಾರತದಲ್ಲಿದ್ದು, ಮುಖ್ಯವಾದ ಜಾಗಗಳನ್ನೇಲ್ಲಾ ನೊಡುತ್ತಾ ಇದ್ದ ಎಂದು. ಅವನ ದೇಶದಲ್ಲಿ ಅವನು, ವೈಟರ್ ಅಂತೆ, ಕನ್ನಡದಲ್ಲಿ ಹೇಳಬೇಕೆಂದರೆ "ಮಾಣಿ"...ಇಲ್ಲಿಯ ಮಾಣಿಗಳು ಹೊರ ದೇಶಕ್ಕೆ ಹೋಗಿ ನೋಡಿಕೊಂಡು ಬರುವ ಸಂಭವವೇನು ಎಂಬ ಪ್ರಶ್ನೆ ಶುರುವಾಯಿತು.





ಉತ್ತರಕಾಶಿ ತಲುಪಿದಾಗ, ಆ ವಿದೇಶಿ ಮನುಷ್ಯ ಕೂಡ, ನಮ್ಮ ಜೊತೆಯೇ ಗಂಗೋತ್ರಿಗೆ ಬರುತ್ತೇನೆಂದು ಹೇಳಿದ, ನಮಗೆ ಅವನ ಪರಿಚಯ ಸಾರಿಯಾಗಿ ಇಲ್ಲದ ಕಾರಣ ಮತ್ತು ನಮ್ಮ ಎಲ್ಲಾ ಪ್ಲಾನ್ ನಮ್ಮನ್ನು ಕುರಿತು ಮಾತ್ರ ಇದ್ದಿದ್ದರಿಂದ, ನಾವು ಅವನಿಗೆ ನಮ್ಮ ಜೊತೆ ಬರುವುದು ಸಾಧ್ಯವಿಲ್ಲವೆಂದು ಹೇಳಿ, ನಾವು ಗೈಡು ಮತ್ತು ಪೋರ್ಟರ್ ಬುಕ್ ಮಾಡಿರುವ ಜಾಗ ಹುಡುಕಿಕೊಂಡು ಹೊರಟೆವು. ಉತ್ತರಕಾಶಿ ಬೆಟ್ಟದ ಮೇಲೆ ಇರುವ ಊರು. ಸಣ್ಣ ರಸ್ತೆಗಳು, ಅಕ್ಕ ಪಕ್ಕದಲ್ಲಿರುವ ಅಂಗಡಿಗಳು, ಮಲೆನಾಡಿನ ಊರಿನ ನೆನಪು ಬರಿಸುತ್ತಿದ್ದವು. ಬಿಸಿಲು, ಪ್ರಖರವಾಗಿತ್ತು. ಈ ಬಿಸಿಲಿನಲ್ಲಿ, ಹೆಣಭಾರದ ಬ್ಯಾಗುಗಳನ್ನು ಹೊತ್ತುಕೊಂಡು ಹೊರಟೆವು, ತಣ್ಣನೆಯ ಜಾಗ ಎಂದು ಏನೆಲ್ಲಾ ತಂದೆ, ಇಲ್ಲಿ ನೋಡಿದರೆ ಈ ತರದ ಬಿಸಿಲು ಎಂದುಕೊಂಡು ಹೊರಟೆವು.

ನಾವು ಬುಕ್ ಮಾಡಿದ ಏಜೆನ್ಸಿಗೆ ಹೋಗಿ, ಅಲ್ಲಿ ಗೈಡು ಮತ್ತೆ ಪೋರ್ಟರುಗಳನ್ನು ಕರೆದುಕೊಂಡು ಕೊನೆಯ ಸಮಯದ ಶಾಪಿಂಗಿಗೆ ಹೊರಟೆವು. ಉತ್ತರಕಾಶಿಯಿಂದ ನಾವು ತರಕಾರಿ, ಸೀಮೆಎಣ್ಣೆ, ಮತ್ತು ಒಂದು ಸ್ಟೊವ್ ತೆಗೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದೆವು. ಒಂದು ಗುಂಪು, ಹೋಗಿ ತರಕಾರಿ ಮತ್ತೆ ಒಂದು ಗುಂಪು ಸ್ಟೊವ್ ತರುವುದೆಂದು ಹೊರಟರು. ಬರುವಾಗ, ಎರಡು ಗುಂಪು ಒಂದೊಂದು ಸ್ಟೊವ್ ತಂದಿದ್ದರು. ಆಗಲೇ ತುಂಬಾ ತಡವಾಗಿತ್ತು, ಇಗ ಒಂದು ವೆಹಿಕಲ್ ಬುಕ್ ಮಾಡಿಕೊಂಡು ಗಂಗೋತ್ರಿಗೆ ಹೊರಡುವುದೆಂದು ವಿಚಾರಿಸಿದಾಗ ಗೊತ್ತಾಗಿದ್ದು ಮಧ್ಯ ದಾರಿಯಲ್ಲಿ ಭೂಕುಸಿತದಿಂದ ರೋಡ್ ಕ್ಲೋಸ್ ಆಗಿದೆಯೆಂದು. ಡ್ರೈವರ್ ನಮ್ಮನ್ನು ರೋಡ್ ಕ್ಲೋಸ್ ಆಗಿರುವತನಕ ಬಿಡುವೆ, ಆ ಕಡೆಯಿಂದ ಬೇರೆ ವೆಹಿಕಲ್ ತಗೊಳ್ಳಿ ಎಂದ, ನವಗೆ ಏನಪ್ಪ ಇದು, ಇನ್ನು ನಮ್ಮ ಟ್ರೆಕಿಂಗ್ ಶುರು ಆಗಿಲ್ಲಾ, ಆಗಲೇ ಏನೇನೋ ವಿಘ್ನಗಳು ಎಂದುಕೊಳ್ಳುತ್ತಾ, ಡ್ರೈವರ್ ಜೊತೆ ಚೌಕಾಸಿ ಮಾಡತೊಡಗಿದೆವು. ನಮ್ಮ ವ್ಯವಹಾರ ಕುದುರಿ, ನಾವು ಹೊರಡುವ ಹೊತ್ತಿಗೆ, ಮದ್ನಾನ ದಾಟಿ ಹೋಗಿತ್ತು. ಉತ್ತರಕಾಶಿಯಿಂದ ಗಂಗೋತ್ರಿಗೆ ಇರುವ ರಸ್ತೆಯನ್ನು ಶಬ್ದಗಳಲ್ಲಿ ಹೇಳಲಿಕ್ಕೆ ಸಾಧ್ಯವಿಲ್ಲ! ಅದನ್ನು ಅಲ್ಲಿಯೇ ಹೋಗಿ ಅನುಭವಿಸಬೇಕು. ನನಗೆ ಸಾಧ್ಯವಾದ ಮಟ್ಟಿಗೆ ನಾನು ವಿವರಿಸಲಿಕ್ಕೆ ಪ್ರಯತ್ನ ಪಡುತ್ತೇನೆ. ಸಣ್ಣ ರಸ್ತೆಯ ಒಂದು ಬದಿ ಬೆಟ್ಟಗಳ ಸಾಲು, ಇನ್ನೊಂದು ಬದಿಗೆ, ದೊಡ್ಡ ಪ್ರಪಾತ. ಎನ್.ಟಿ.ಪಿ.ಸಿ. ಯ ಕೆಲಸ ನೆಡೆಯುತ್ತಿದ್ದರಿಂದ, ರಸ್ತೆ ಎಂದು ಹೇಳಬಹುದು ಮಾತ್ರ, ಅದರೆ ಅಲ್ಲಿ ರಸ್ತೆಯೇ ಇರಲಿಲ್ಲ. ಮಳೆ ಬಂದು ನಿಂತಿದ್ದರಿಂದ, ರಸ್ತೆಯ ತುಂಬಾ ಕೊಚ್ಚೆ. ಕೆಲವೊಂದು ಕಡೆಯಂತೂ ಏನಾಗುತ್ತದೆಯೋ ಎಂದು ಭಯವಾಗುತ್ತಿತ್ತು. ಬೃಹತ್ ಬಂಡೆಗಳನ್ನು ಕೊರೆದು, ಅಲ್ಲಿ ಎನ್.ಟಿ.ಪಿ.ಸಿ.ಯ ಕೆಲಸ ನೆಡೆಯುತ್ತಿತ್ತು. ಪ್ರಕೃತಿಯನ್ನು ಮೀರಿ ನಿಲ್ಲುವ ಪ್ರಯತ್ನ, ಗುರುತ್ವಾಕರ್ಶಣೆಯಿಂದ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿ, ಅಲ್ಲಿಂದ ಕಂಟ್ರೋಲಿನಲ್ಲಿ ನೀರನ್ನು, ಮುಂದಕ್ಕೆ ಬಿಡುವುದು, ಬಂಡೆಗಳನ್ನು ಕೊರೆದು, ಅಲ್ಲಿ ವಿದ್ಯುತ್ ಚಕ್ತಿಯನ್ನು ಉತ್ಪಾದಿಸುವುದು, ಪ್ರಕೃತಿ ಇರುವುದೇ ನಮಗಾಗಿ, ನಮ್ಮ ಸೇವೆಗಾಗಿ ಎಂದು ಭಾವಿಸುವ ಮನುಶ್ಯನ ಯೋಚನೆಗಳಿಗೆ ಕೊನೆ ಇದೆಯೇ? ಇದಕ್ಕೆಲ್ಲಾ ಒಂದು ದಿನ ಪ್ರಕೃತಿಯೇ ಅಂತ್ಯ ಹಾಡುತ್ತದೆ ಎಂದುಕೊಳ್ಳತೊಡಗಿದೆ. 








To Be Continued....

No comments:

Post a Comment